ರಾಜಶೇಖರ್, ಎಂ ಎಸ್
(1944- ). ಸದಭಿರುಚಿಯ ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ ಎಂ.ಎಸ್. ರಾಜಶೇಖರ್. ಕನ್ನಡ ಚಿತ್ರರಂಗದ ನಟ ಹಾಗೂ ಹಿರಿಯ ಪ್ರಸಾಧನಕಾರರಾದ ಎಂ.ಎಸ್.ಸುಬ್ಬಣ್ಣ ಅವರ ಪುತ್ರ. ಹುಟ್ಟಿದ್ದು ಮೈಸೂರಿನಲ್ಲಿ, 1944ರಲ್ಲಿ ಸುಬ್ಬಣ್ಣ ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಎಲ್ಲ ಕನ್ನಡ ಕಲಾವಿದರಿಗೆ ಪ್ರಸಾಧನಕಾರರಾಗಿದ್ದರು. ರಾಜಕುಮಾರ್ ಅವರ ಬಹುತೇಕ ಚಿತ್ರಗಳಿಗೆ ಪ್ರಸಾಧನ ಕಲಾವಿದರಾಗಿ ದುಡಿಯುತ್ತಿದಾಗ ತಮ್ಮ ಪುತ್ರ ರಾಜಶೇಖರರನ್ನು ರಾಜಕುಮಾರ್ ಚಿತ್ರಬಳಗಕ್ಕೆ ಒಪ್ಪಿಸಿದರು. ರಾಜಶೇಖರ್ ಆ ತಂಡದಲ್ಲಿ ಸುಮಾರು 17 ವರ್ಷಗಳ ಕಾಲ ದುಡಿದರು. ದೊರೆ ಭಗವಾನ್, ವಿ.ಸೋಮಶೇಖರ್, ರವೀ ವಿಜಯಾರೆಡ್ಡಿ-ಮೊದಲಾದವರ ಬಳಿ ಸಹನಿರ್ದೇಶಕರಾಗಿ ದುಡಿದು ಅನುಭವಗಳಿಸಿದರು. ಹಂತ ಹಂತವಾಗಿ ಮೇಲೇರಿದರು. ಸಹ ನಿದೇರ್ಶಕರಾದರು. ರಾಜಕುಮಾರ್ ಅವರ `ಧ್ರುವತಾರೆ (1984) ನಿರ್ದೇಶಿಸುವ ಅವಕಾಶ ಪ್ರಾಪ್ತವಾಯಿತು. ಆ ಚಿತ್ರಕ್ಕೆ 1985-86ರ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭ್ಯವಾಯಿತು. ಇದುವರೆಗೂ ಸುಮಾರು 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವೆಲ್ಲ ಸದಭಿರುಚಿಯಿಂದ ಕೂಡಿದ ಮನರಂಜನಾ ಚಿತ್ರಗಳು, ಮನರಂಜನೆ ಜೊತೆಗೆ ಸಂದೇಶವೂ ಇರುತ್ತದೆ. ವ್ಯಾಪಾರಿದೃಷ್ಟಿಯಿಂದ ಯಶಸ್ವಿ. ಶತದಿನೋತ್ಸವ, ರಜತೋತ್ಸವ ಆಚರಿಸಿರುವ ಚಿತ್ರಗಳು. `ನಂಜುಂಡಿ ಕಲ್ಯಾಣ' 10 ಕೇಂದ್ರಗಳಲ್ಲಿ ರಜತೋತ್ಸವ, ಒಂದು ವರ್ಷ ಪ್ರದರ್ಶನ ಕಂಡ ಚಿತ್ರ. ರಾಜಶೇಖರ್ ಅವರ ಜನಪ್ರಿಯ ಚಿತ್ರಗಳಲ್ಲಿ ಒಂದು. ರಾಜ್ ಸಂಸ್ಥೆಗಳಿಗಾಗಿ ನಿರ್ಮಿಸಿದ ಧ್ರುವತಾರೆ `ಅನುರಾಗ ಅರಳಿತು, `ರಥಸಪ್ತಮಿ, `ಮನ ಮೆಚ್ಚಿದ ಹುಡುಗಿ', `ಹೃದಯ ಹಾಡಿತು-ಇವು ಕೆಲವು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿದವು.

ರಾಜಶೇಖರ್ ಅವರಿಗೆ ಕಾದಂಬರಿಗಳ ಚಿತ್ರಣದ ಮೇಲೆ ಒಲವು. ಟಿ.ಕೆ.ರಾಮರಾವ್, ವಿಜಂiÀi ಸಾಸನೂರು, ವಿದ್ಯುಲ್ಲತಾ, ಎನ್ಕೆ, ಕುಂ.ವೀರಭದ್ರಪ್ಪ, ಸಾಯಿಸುತೆ-ಮೊದಲಾದವರ ಕಾದಂಬರಿಗಳನ್ನು ಆಧರಿಸಿದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ರಾಜಕುಮಾರ್, ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಅವರಲ್ಲದೆ ಅಂಬರೀಷ್, ಶಶಿಕುಮಾರ್, ಸುಧಾರಾಣಿ-ಮೊದಲಾದ ನಟ-ನಟಿಯರ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಾಲಾಶ್ರೀ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು, ರಾಜಶೇಖರ್ ನಿರ್ದೇಶನದ ನಂಜುಂಡಿ ಕಲ್ಯಾಣದ ಮೂಲಕ ಪ್ರೇಮಾ, ಅನುಪ್ರಭಾಕರ, ಶೃತಿ, ಮೋಹನ್ ಮೊದಲಾದವರು ರಾಜಶೇಖರ್ ನಿರ್ದೇಶನದ ಚಿತ್ರಗಳ ಮೂಲಕ. `ಗಜಪತಿ ಗರ್ವಭಂಗ, `ಆಸೆಗೊಬ್ಬ-ಮೀಸೆಗೊಬ್ಬ, ರಜತೋತ್ಸವ ಕಂಡ ಚಿತ್ರಗಳು. `ಅದೇ ರಾಗ ಅದೇ ಹಾಡು, `ಮೋಡದ ಮರೆಯಲ್ಲಿ, `ನಾವಿಬ್ಬರು-ನಮಗಿಬ್ಬರು, `ಡಕೋಟ ಎಕ್ಸ್‍ಪ್ರೆಸ್, ಶತದಿನೋತ್ಸವ ಆಚರಿಸಿತು. `ಮಣ್ಣಿನ ದೋಣಿ, `ಗಂಡು ಸಿಡಿಗುಂಡು- ರಾಜಶೇಖರ್ ನಿರ್ದೇಶನದಲ್ಲಿ ಯಶಸ್ವಿಯಾದ ಇವರ ಚಿತ್ರಗಳು.
ಸದಭಿರುಚಿಯ ಉತ್ತಮ ಗುಣಮಟ್ಟದ ಚಿತ್ರಗಳ ನಿರ್ಮಾಣ ಮಾಡಿದ ಎಂ.ಎಸ್, ರಾಜಶೇಖರ್ ಅವರು 2001-2002ನೇ ಸಾಲಿನ `ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.				

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ